
ಬದುಕು ಸಾಕು ಅನ್ನಿಸಿ ಬೆಟ್ಟದತ್ತ ಹೊರಟ ಆ ಒಂಟಿ ಪೆಂಗ್ವಿನ್ ಕಥೆ!
ಸ್ನೇಹಿತರೇ, ನಮಸ್ಕಾರ. ಸೋಮವಾರ ಬಂತು ಅಂದ್ರೆ ಸಾಕು, ನಮಗೆಲ್ಲ ಎಲ್ಲಿಲ್ಲದ ಆಲಸ್ಯ, ಅದೇನೋ ಒಂಥರಾ ಬೇಸರ. “ಯಾರಪ್ಪಾ ಕಂಡುಹಿಡಿದ್ರು ಈ ಕೆಲಸ, ಈ ಜೀವನ?” ಅಂತ ನಮಗೆ ನಾವೇ ಕೇಳ್ಕೊಳ್ತಿರ್ತೀವಿ ಅಲ್ವಾ? ಆದರೆ, ಇವತ್ತು ನಾನು ನಿಮಗೆ ಇಡೀ ಇಂಟರ್ನೆಟ್ ಲೋಕವನ್ನೇ ಹುಚ್ಚೆಬ್ಬಿಸಿರುವ ಒಂದು ಪುಟ್ಟ ಹಕ್ಕಿಯ ಬಗ್ಗೆ ಹೇಳ್ತೀನಿ. ಇದು ಕೇವಲ ಹಕ್ಕಿಯ ಕಥೆಯಲ್ಲ, ಇದು ನಮ್ಮ ನಿಮ್ಮೆಲ್ಲರ ಒಳಗಿರುವ ಸುಸ್ತಾಗಿರುವ ಮನಸ್ಸಿನ ಕಥೆ ಕೂಡ ಹೌದು.
ಒಂದು ಪೆಂಗ್ವಿನ್… ಹೌದು, ಕೇವಲ ಒಂದೇ ಒಂದು ಪೆಂಗ್ವಿನ್ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಮೀಮ್ಸ್ಗಳ ಮೇಲೆ ಮೀಮ್ಸ್ಗಳು ಹರಿದು ಬರ್ತಿವೆ. ಇದನ್ನು ಇಂಟರ್ನೆಟ್ ಲೋಕ ‘ನಿಹಲಿಸ್ಟ್ ಪೆಂಗ್ವಿನ್’ (Nihilist Penguin) ಅಂತ ಕರೆಯುತ್ತಿದೆ. ಈ ಹುಚ್ಚು ಎಷ್ಟರ ಮಟ್ಟಿಗೆ ಹಬ್ಬಿದೆ ಅಂದ್ರೆ, ಅಮೆರಿಕದ ವೈಟ್ ಹೌಸ್ ಕೂಡ ಈ ಟ್ರೆಂಡ್ನಲ್ಲಿ ಭಾಗಿಯಾಗಲು ಹೋಗಿ ಒಂದು ದೊಡ್ಡ ಎಡವಟ್ಟು ಮಾಡಿಕೊಂಡಿದೆ.
ಅಷ್ಟಕ್ಕೂ ವೈಟ್ ಹೌಸ್ ಮಾಡಿದ ಆ ತಪ್ಪು ಏನು ಗೊತ್ತಾ? ಡೊನಾಲ್ಡ್ ಟ್ರಂಪ್ ಅವರು ಪೆಂಗ್ವಿನ್ ಜೊತೆ ಗ್ರೀನ್ಲ್ಯಾಂಡ್ನತ್ತ ಹೋಗುತ್ತಿರುವ ಫೋಟೋ ಒಂದನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇಲ್ಲೇ ಇರೋದು ನೋಡಿ ಅಸಲಿ ಟ್ವಿಸ್ಟ್! ಭೂಗೋಳ ಶಾಸ್ತ್ರದ ಪ್ರಕಾರ ಪೆಂಗ್ವಿನ್ಗಳು ಉತ್ತರ ಗೋಳಾರ್ಧದಲ್ಲಿ, ಅಂದ್ರೆ ಗ್ರೀನ್ಲ್ಯಾಂಡ್ ಭಾಗದಲ್ಲಿ ವಾಸಿಸುವುದೇ ಇಲ್ಲ. ಅವು ಇರೋದು ದಕ್ಷಿಣ ಗೋಳಾರ್ಧದ ಅಂಟಾರ್ಕ್ಟಿಕಾದಲ್ಲಿ ಮಾತ್ರ.
ವೈಟ್ ಹೌಸ್ನವರೂ ಕೂಡ ಭೂಗೋಳ ಶಾಸ್ತ್ರದ ಕ್ಲಾಸ್ ಮಿಸ್ ಮಾಡಿದ ಹಾಗಿದೆ ಅನ್ಸುತ್ತೆ ಅಲ್ವಾ? ಸರಿ, ಈಗ ಅಸಲಿ ವಿಷಯಕ್ಕೆ ಬರೋಣ. ಈ ಒಂದು ಪೆಂಗ್ವಿನ್ ವಿಡಿಯೋಗಾಗಿ ಇಡೀ ಜಗತ್ತು ಯಾಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದೆ? ಈ ಪೆಂಗ್ವಿನ್ ಎಲ್ಲಿಂದ ಬಂತು? ಇದರ ಹಿಂದಿರೋ ಆ ಕರಾಳ ಸತ್ಯವೇನು? ಬನ್ನಿ ಈ ವಿಚಿತ್ರ ಮಿಸ್ಟರಿಯನ್ನು ಬಿಡಿಸುತ್ತಾ ಹೋಗೋಣ.

ಸಾವಿನ ನಡಿಗೆಯೋ ಅಥವಾ ಬದುಕಿನಿಂದ ಪಲಾಯನವೋ?
ಈ ಕಥೆ ಶುರುವಾಗೋದು 2007ರಲ್ಲಿ. ಜರ್ಮನ್ ಫಿಲ್ಮ್ ಮೇಕರ್ ವರ್ನರ್ ಹರ್ಜೋಗ್ ಅವರು ಅಂಟಾರ್ಕ್ಟಿಕಾಕ್ಕೆ ಹೋಗಿ ‘ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್’ ಅನ್ನೋ ಡಾಕ್ಯುಮೆಂಟರಿ ಮಾಡ್ತಾರೆ. ಆಗ ಅವರ ಕ್ಯಾಮೆರಾದಲ್ಲಿ ಒಂದು ವಿಚಿತ್ರ ದೃಶ್ಯ ಸೆರೆಯಾಗುತ್ತೆ. ಪೆಂಗ್ವಿನ್ಗಳ ಗುಂಪೊಂದು ಆಹಾರಕ್ಕಾಗಿ ಸಮುದ್ರದ ಕಡೆಗೆ ಹೋಗ್ತಾ ಇರುತ್ತೆ. ಆದರೆ ಆ ಗುಂಪಿನಲ್ಲಿದ್ದ ಒಂದು ಪೆಂಗ್ವಿನ್ ಮಾತ್ರ ಇದ್ದಕ್ಕಿದ್ದಂತೆ ಉಲ್ಟಾ ತಿರುಗುತ್ತೆ.
ಗುಂಪಿನ ಎಲ್ಲಾ ಪೆಂಗ್ವಿನ್ಗಳು ಸುಖವಾಗಿ ಬದುಕಲು ಸಮುದ್ರದ ಕಡೆ ನಡೆದ್ರೆ, ಈ ಒಂದು ಪೆಂಗ್ವಿನ್ ಮಾತ್ರ ಯಾರ ಮಾತಿಗೂ ಕಿವಿಕೊಡದೆ, ಆ ವಿಶಾಲವಾದ ಮಂಜಿನ ಬೆಟ್ಟಗಳ ಕಡೆಗೆ ಹೆಜ್ಜೆ ಹಾಕಲು ಶುರು ಮಾಡುತ್ತೆ. ಪೆಂಗ್ವಿನ್ಗಳು ಸಾಮಾನ್ಯವಾಗಿ ಸಮುದ್ರದ ಹತ್ತಿರವೇ ಇರಬೇಕು, ಇಲ್ಲದಿದ್ರೆ ಅವು ಸಾಯುತ್ತವೆ ಅನ್ನೋದು ಗೊತ್ತಿದ್ರೂ ಆ ಪೆಂಗ್ವಿನ್ ಮೌನವಾಗಿ ಬೆಟ್ಟ ಹತ್ತುತ್ತೆ.
ಹರ್ಜೋಗ್ ಅವರು ಈ ನಡಿಗೆಯನ್ನು ‘ಡೆತ್ ಮಾರ್ಚ್’ ಅಥವಾ ‘ಸಾವಿನ ನಡಿಗೆ’ ಅಂತ ಕರೆದಿದ್ದಾರೆ. ಯಾಕಂದ್ರೆ ಆ ಬೆಟ್ಟದ ಕಡೆ ಹೋದ ಮೇಲೆ ಆ ಪೆಂಗ್ವಿನ್ ಬದುಕೋದು ಅಸಾಧ್ಯ. ಸುಮಾರು 20 ವರ್ಷಗಳ ಹಿಂದೆ ನಡೆದ ಈ ಘಟನೆ ಈಗ 2026ರಲ್ಲಿ ಯಾಕೆ ವೈರಲ್ ಆಗ್ತಿದೆ? ಯಾಕೆ ಜನರು ಈ ಪೆಂಗ್ವಿನ್ ನಡೆಯನ್ನು ಕಂಡು ಭಾವುಕರಾಗ್ತಿದ್ದಾರೆ?
ಯಾಕಂದ್ರೆ ಇವತ್ತಿನ ಮನುಷ್ಯ ತನ್ನನ್ನು ತಾನು ಆ ಪೆಂಗ್ವಿನ್ನಲ್ಲಿ ನೋಡ್ಕೊಳ್ತಿದ್ದಾನೆ. ಈ ಪೆಂಗ್ವಿನ್ ಕಿರುಚೋದಿಲ್ಲ, ಪ್ರತಿಭಟನೆ ಮಾಡೋದಿಲ್ಲ ಅಥವಾ ಅಳೋದಿಲ್ಲ. ಅದು ಮೌನವಾಗಿ ಎಲ್ಲವನ್ನೂ ಬಿಟ್ಟು ದೂರ ನಡೆದು ಹೋಗುತ್ತೆ. ಇವತ್ತಿನ ಒತ್ತಡದ ಜಗತ್ತಿನಲ್ಲಿ ನಮಗೂ ಕೂಡ ಅನ್ಸೋದು ಇದನ್ನೇ ಅಲ್ವಾ? “ಎಲ್ಲವನ್ನೂ ಬಿಟ್ಟು ಎಲ್ಲಾದರೂ ದೂರ ಹೋಗಿಬಿಡೋಣ” ಅನ್ನೋ ಆ ಮೌನವಾದ ನಿರ್ಗಮನವೇ ಈ ವೈರಲ್ ವಿಡಿಯೋದ ಗುಟ್ಟು.

ಒತ್ತಡದ ಜಗತ್ತಿಗೆ ಒಂದು ಪುಟ್ಟ ಪೆಂಗ್ವಿನ್ ನೀಡಿದ ಸಂದೇಶ!
ಇಂಟರ್ನೆಟ್ ಈ ಪೆಂಗ್ವಿನ್ಗೆ ‘ನಿಹಲಿಸಂ’ ಅನ್ನೋ ಹೆಸರಿಟ್ಟಿದೆ. ಇದರ ಅರ್ಥ “ಜೀವನದಲ್ಲಿ ಯಾವುದೇ ಉದ್ದೇಶವಿಲ್ಲ, ಯಾವುದಕ್ಕೂ ಅರ್ಥವಿಲ್ಲ” ಅಂತ. 2026ರ ಈ ಕಾಲದಲ್ಲಿ ಪ್ರತಿಯೊಬ್ಬರಿಗೂ ಒಂದು ರೀತಿಯ ದಣಿವು (Burnout) ಕಾಡ್ತಿದೆ. ಕೆಲಸದ ಒತ್ತಡ, ಆರ್ಥಿಕ ಮುಗ್ಗಟ್ಟು, ಸೋಶಿಯಲ್ ಮೀಡಿಯಾದ ಅಬ್ಬರ… ಇವೆಲ್ಲದರ ನಡುವೆ ನಾವು ಎಷ್ಟು ಓಡಿದ್ರೂ ಒಳಗಡೆ ಒಂದು ರೀತಿಯ ಶೂನ್ಯ ಭಾವನೆ ಮೂಡುತ್ತಿದೆ.
ನಿಮಗೆ ಗೊತ್ತಾ? ಒಂದು ವರದಿಯ ಪ್ರಕಾರ ಜಗತ್ತಿನಲ್ಲಿ ನೂರು ಕೋಟಿಗೂ ಹೆಚ್ಚು ಜನರು ಆತಂಕ ಮತ್ತು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅಮೆರಿಕದಂತಹ ದೇಶದಲ್ಲೇ 82% ಉದ್ಯೋಗಿಗಳು ಈ ಒತ್ತಡಕ್ಕೆ ಸಿಲುಕಿದ್ದಾರೆ. ಹಾಗಾಗಿಯೇ ಜನರಿಗೆ ಆ ಪೆಂಗ್ವಿನ್ ಕಂಡಾಗ, “ನಾನು ಕೂಡ ಆ ಪೆಂಗ್ವಿನ್ನಂತೆ ಎಲ್ಲವನ್ನೂ ಬಿಟ್ಟು ಹೋಗಬೇಕು” ಅನ್ನೋ ಭಾವನೆ ಮೂಡ್ತಿದೆ. ಆ ಪೆಂಗ್ವಿನ್ ನಮ್ಮ ಸುಸ್ತಾಗಿರೋ ಮನಸ್ಸಿನ ಸಂಕೇತವಾಗಿ ಬಿಟ್ಟಿದೆ.
ಆದರೆ ವಿಜ್ಞಾನಿಗಳು ಹೇಳೋದು ಬೇರೆಯೇ ಇದೆ. ಅವರ ಪ್ರಕಾರ ಆ ಪೆಂಗ್ವಿನ್ ಯಾವುದೋ ತತ್ವಶಾಸ್ತ್ರದ ಬಗ್ಗೆ ಯೋಚಿಸಿ ಬೆಟ್ಟ ಹತ್ತುತ್ತಿಲ್ಲ. ಅದಕ್ಕೆ ದಾರಿ ತಪ್ಪಿರಬಹುದು ಅಥವಾ ಅದರ ಆರೋಗ್ಯ ಸರಿ ಇಲ್ಲದಿರಬಹುದು. ಆದರೆ ಮನುಷ್ಯ ಮಾತ್ರ ತನ್ನ ಸೋಲನ್ನು ಅಥವಾ ತನ್ನ ದಣಿವನ್ನೇ ಆ ಪೆಂಗ್ವಿನ್ ಮೇಲೆ ಹಾಕುತ್ತಿದ್ದಾನೆ. ನಮಗೆ ಅದು ‘ತ್ಯಾಗ’ ಅಥವಾ ‘ಬಂಡಾಯ’ದಂತೆ ಕಾಣ್ತಿದೆ.
ನನ್ನ ಕೇಳಿದ್ರೆ, ಈ ಪೆಂಗ್ವಿನ್ ನಮಗೆ ಒಂದು ಪಾಠ ಕಲಿಸುತ್ತಿದೆ. ಬದುಕಿನಿಂದ ಓಡಿ ಹೋಗೋದಲ್ಲ, ಬದುಕಿನ ಹಾದಿಯನ್ನು ಬದಲಾಯಿಸಬೇಕು. ನಮಗೆ ಸುಸ್ತಾಗಿದೆ ಅಂತ ಒಪ್ಪಿಕೊಳ್ಳೋದ್ರಲ್ಲಿ ತಪ್ಪಿಲ್ಲ. ಸ್ವಲ್ಪ ವಿರಾಮ ತಗೊಳ್ಳಿ, ನಿಮ್ಮ ಆಯಾಸವನ್ನು ಹಂಚಿಕೊಳ್ಳಿ. ಆ ಪೆಂಗ್ವಿನ್ ಬೆಟ್ಟದ ನಡುವೆ ಕಳೆದುಹೋದಂತೆ ನೀವು ಕಳೆದುಹೋಗಬೇಡಿ. ಒಂದೊಂದೇ ಹೆಜ್ಜೆ ಇಟ್ಟು ಮತ್ತೆ ಬದುಕಿಗೆ ಮರಳಿ ಬನ್ನಿ. ಕೆಲವೊಮ್ಮೆ ಎಲ್ಲವನ್ನೂ ಬಿಟ್ಟು ಹೋಗೋದಕ್ಕಿಂತ, ತಿರುಗಿ ನಿಂತು ಹೋರಾಡೋದು ನಿಜವಾದ ಶೌರ್ಯ ಅಲ್ವಾ?
ನಿಮ್ಮ ಅನಿಸಿಕೆಗಳನ್ನ ಮರಿದೆ ಕಾಮೆಂಟ್ ಮಾಡಿ ತಿಳಿಸಿ. ಇಂಥದ್ದೇ ಇನ್ನು ಹೆಚ್ಚು ಮಿಸ್ಟರಿ ಮತ್ತು ರೋಚಕ ಕಥೆಗಳಿಗಾಗಿ ನಮ್ಮ “Insider ಕನ್ನಡ” ಬ್ಲಾಗ್ ಓದೋದನ್ನ ಮರೀಬೇಡಿ. ಸಿಗೋಣ ಮುಂದಿನ ಪೋಸ್ಟ್ನಲ್ಲಿ!
