
ಆ ಒಂದು ರಾತ್ರಿ.. ಆ ಪಾರ್ಕಿಂಗ್ ಲಾಟ್.. ಏನಾಯಿತು ಆ ಸುಂದರ ಜೋಡಿಗೆ?
ಪ್ರೀತಿಯಲ್ಲಿರುವ ಒಂದು ಜೋಡಿ, ವಾರಾಂತ್ಯದ ಮೋಜಿಗೆಂದು ಪಾರ್ಟಿಗೆ ಹೊರಟರೆ ಅಲ್ಲಿ ಸಾವು ಕಾದಿರುತ್ತೆ ಎಂದು ಯಾರಾದರೂ ಊಹಿಸಲು ಸಾಧ್ಯವೇ? ನೀವು ಯಾವತ್ತಾದರೂ ಯೋಚಿಸಿದ್ದೀರಾ, ಕೇವಲ ಒಂದು ಕ್ಷಣದ ಅಚಾತುರ್ಯ ಇಡೀ ಜೀವನವನ್ನೇ ಬಲಿಪಡೆಯಬಹುದೇ? ಪೊಲೀಸರ ಒಂದು ಸಣ್ಣ ನಿರ್ಲಕ್ಷ್ಯ ಅದೆಂತಹ ಘೋರ ದುರಂತಕ್ಕೆ ದಾರಿ ಮಾಡಿಕೊಡಬಹುದು? ಅಷ್ಟಕ್ಕೂ ಆ ರಾತ್ರಿ ಟೆನೆಸಿಯ ನಕ್ಸ್ವಿಲ್ ನಗರದಲ್ಲಿ ನಡೆದ ಆ ಭಯಾನಕ ಘಟನೆ ಏನು? ಶಾನನ್ ಮತ್ತು ಕ್ರಿಸ್ ಎಂಬ ಆ ಮುಗ್ಧ ಜೀವಗಳು ಅಂದು ಕಾಣೆಯಾದದ್ದು ಎಲ್ಲಿ?
ಜನವರಿ 6, 2007. ಶಾನನ್ ಕ್ರಿಶ್ಚಿಯನ್ ಎಂಬ 21 ವರ್ಷದ ಕಾಲೇಜು ವಿದ್ಯಾರ್ಥಿನಿ ಮತ್ತು ಅವಳ ಪ್ರಿಯಕರ 23 ವರ್ಷದ ಕ್ರಿಸ್ಟೋಫರ್ ನ್ಯೂಸಮ್ ಅಂದು ರಾತ್ರಿ ಬಹಳ ಖುಷಿಯಾಗಿದ್ದರು. ಕ್ರಿಸ್ ಒಬ್ಬ ಕಷ್ಟಪಟ್ಟು ಕೆಲಸ ಮಾಡುವ ಕಾರ್ಪೆಂಟರ್ ಆಗಿದ್ದರೆ, ಶಾನನ್ ಗೋಲ್ಫ್ ಆಟದಲ್ಲಿ ಆಸಕ್ತಿಯಿದ್ದ ಬುದ್ಧಿವಂತ ಹುಡುಗಿ. ಇಬ್ಬರೂ ಅಂದು ರಾತ್ರಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಲು ಪ್ಲಾನ್ ಮಾಡಿದ್ದರು. ಆದರೆ ರಾತ್ರಿ ಎಷ್ಟಾದರೂ ಅವರು ಪಾರ್ಟಿಗೆ ಬರಲೇ ಇಲ್ಲ. ಅವರ ಫೋನ್ ರಿಂಗ್ ಆಗುತ್ತಿತ್ತೆ ಹೊರತು ಯಾರೂ ಉತ್ತರ ನೀಡುತ್ತಿರಲಿಲ್ಲ.
ಮರುದಿನ ಬೆಳಿಗ್ಗೆ ಶಾನನ್ ಮನೆಯವರಿಗೆ ಯಾವುದೋ ಅನಾಹುತ ನಡೆದಿದೆ ಎಂಬ ಸಣ್ಣ ನಡುಕ ಶುರುವಾಯಿತು. ತಾಯಿ ಡಯಾನಾಗೆ ಮಗಳು ಫೋನ್ ಎತ್ತದಿದ್ದಾಗ ಎದೆ ಬಡಿತ ಜೋರಾಯಿತು. ಅತ್ತ ಕ್ರಿಸ್ನ ಸ್ನೇಹಿತರು ಪಾರ್ಕಿಂಗ್ ಲಾಟ್ನಲ್ಲಿ ಅವನ ಟ್ರಕ್ ಮಾತ್ರ ಇರುವುದನ್ನು ಕಂಡು ದಂಗಾದರು. ಶಾನನ್ ಕಾರ್ ಎಲ್ಲಿ? ಅವರಿಬ್ಬರೂ ಎಲ್ಲಿ ಮಾಯವಾದರು? ಈ ಎಲ್ಲಾ ಪ್ರಶ್ನೆಗಳು ಮನೆಯವರನ್ನು ಕಂಗಾಲು ಮಾಡಿದವು. ಕೂಡಲೇ ಪೊಲೀಸರಿಗೆ ದೂರು ನೀಡಿದರು.
ಆದರೆ ಪೋಲಿಸರು “ಅವರಿಬ್ಬರೂ ವಯಸ್ಕರು, ಎಲ್ಲಾದರೂ ಹೋಗಿರಬಹುದು, 24 ಗಂಟೆ ಕಳೆಯುವವರೆಗೆ ನಾವು ಏನೂ ಮಾಡಲು ಸಾಧ್ಯವಿಲ್ಲ” ಎಂಬ ಪೊಲೀಸರ ಅಸಡ್ಡೆ ಆ ಕುಟುಂಬದ ಪಾಲಿಗೆ ಶಾಪವಾಯಿತು. ಇಂದಿನ ಕಾಲದಲ್ಲಿ ಮಿಸ್ಸಿಂಗ್ ರಿಪೋರ್ಟ್ ಆದ ತಕ್ಷಣ ತನಿಖೆ ಶುರುವಾಗುತ್ತದೆ, ಆದರೆ ಅಂದು ಆ ಅಮೂಲ್ಯ ಗಂಟೆಗಳು ವ್ಯರ್ಥವಾದವು. ಪೊಲೀಸರು ಕೈಕಟ್ಟಿ ಕುಳಿತಾಗ, ಕುಟುಂಬಸ್ಥರೇ ಬೀದಿಗಿಳಿದು ಹುಡುಕಾಟ ಆರಂಭಿಸಿದರು.
ಅಂತಿಮವಾಗಿ ಶಾನನ್ ಫೋನ್ನ ಸಿಗ್ನಲ್ ಹಿಡಿದು ಅವರು ‘ಚೆರಿ ಸ್ಟ್ರೀಟ್’ ಎಂಬ ಅಪಾಯಕಾರಿ ಪ್ರದೇಶಕ್ಕೆ ತಲುಪಿದರು. ಅಲ್ಲಿ ಶಾನನ್ ಕಾರ್ ಪತ್ತೆಯಾಯಿತು. ಆದರೆ ಕಾರ್ ಒಳಗಿನ ದೃಶ್ಯ ಮಾತ್ರ ಯಾವುದೋ ಸಂಚಿನ ಮುನ್ಸೂಚನೆ ನೀಡುತ್ತಿತ್ತು. ನೀಟಾಗಿ ಇರುತ್ತಿದ್ದ ಕಾರ್ ಒಳಗೆ ಕೆಸರು ತುಂಬಿತ್ತು, ಶಾನನ್ಗೆ ಪೆಡಲ್ ಮುಟ್ಟಲು ಸಾಧ್ಯವಾಗದಷ್ಟು ಸೀಟು ಹಿಂದೆ ಹೋಗಿತ್ತು. ಸಿಗರೇಟ್ ಸೇದದ ಆ ಜೋಡಿಯ ಕಾರಿನಲ್ಲಿ ಸಿಗರೇಟ್ ಪ್ಯಾಕೆಟ್ ಇತ್ತು! ಆ ಕಾರಿನಲ್ಲಿದ್ದ ಬೆರಳಚ್ಚುಗಳು ಪೊಲೀಸರನ್ನು ‘ಚಿಪ್ಮನ್ ಸ್ಟ್ರೀಟ್’ನ ಒಂದು ಮನೆಯ ಬಾಗಿಲಿಗೆ ಕರೆದೊಯ್ದವು.

ಕಸದ ಡಬ್ಬಿಯಲ್ಲಿ ಶವ! ಮನುಷ್ಯನ ಕ್ರೌರ್ಯಕ್ಕೆ ಮಿತಿಯೇ ಇಲ್ಲವೇ?
ಆ ಒಂದು ಮನೆಯಿಂದ ಶುರುವಾದ ತನಿಖೆ ಅಮೆರಿಕವನ್ನೇ ನಡುಗಿಸಿದ ಕ್ರೈಮ್ ರಹಸ್ಯವನ್ನು ಬಿಚ್ಚಿಟ್ಟಿತು. ಜನವರಿ 7ರಂದು ರೈಲ್ವೇ ಟ್ರ್ಯಾಕ್ ಬಳಿ ಕೆಲಸ ಮಾಡುತ್ತಿದ್ದ ಒಬ್ಬ ಕಾರ್ಮಿಕನಿಗೆ ಬೆಚ್ಚಿಬೀಳಿಸುವ ದೃಶ್ಯವೊಂದು ಕಂಡಿತು. ಅಲ್ಲಿ ಒಂದು ಶವವಿತ್ತು! ಅದು ಕ್ರಿಸ್ಟೋಫರ್ ನ್ಯೂಸಮ್ನ ಶವ. ಅವನ ಕೈಕಾಲುಗಳನ್ನು ಅವನದೇ ಬೆಲ್ಟ್ ಮತ್ತು ಸಾಕ್ಸ್ನಿಂದ ಕಟ್ಟಿ ಹಾಕಲಾಗಿತ್ತು. ಬರಿಗಾಲಿನಲ್ಲಿ ಅವನನ್ನು ಕೆಸರಿನಲ್ಲಿ ನಡೆಸಿಕೊಂಡು ಹೋಗಿ, ಅತ್ಯಂತ ಸಮೀಪದಿಂದ ಗುಂಡಿಕ್ಕಿ ಕೊಲ್ಲಲಾಗಿತ್ತು. ಅಷ್ಟೇ ಅಲ್ಲ, ಸಾಕ್ಷ್ಯ ನಾಶಪಡಿಸಲು ಅವನ ದೇಹಕ್ಕೆ ಬೆಂಕಿಯನ್ನು ಕೂಡ ಹಚ್ಚಲಾಗಿತ್ತು.
ಕ್ರಿಸ್ನ ಅಂತ್ಯ ಅಷ್ಟು ಭೀಕರವಾಗಿದ್ದರೆ, ಇತ್ತ ಶಾನನ್ ಕಥೆಯೇನಾಯಿತು? ಪೊಲೀಸರು ಚಿಪ್ಮನ್ ಸ್ಟ್ರೀಟ್ನ ಆ ಮನೆಯೊಳಗೆ ನುಗ್ಗಿದಾಗ ಇಡೀ ಮನೆ ಸ್ತಬ್ಧವಾಗಿತ್ತು. ಕಿಚನ್ ಮೂಲೆಯಲ್ಲಿದ್ದ ಒಂದು ದೊಡ್ಡ ಕಸದ ಡಬ್ಬಿಯನ್ನು (Trash Can) ತೆರೆದಾಗ ಅಲ್ಲಿ ಕಂಡ ದೃಶ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿತು. ಶಾನನ್ ದೇಹವನ್ನು ಐದು ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಸುತ್ತಿ, ಅತ್ಯಂತ ಕ್ರೂರವಾಗಿ ಕಟ್ಟಿ ಆ ಡಬ್ಬಿಯೊಳಗೆ ತುರುಕಲಾಗಿತ್ತು. ಅವಳು ಉಸಿರುಗಟ್ಟಿಯೇ ಪ್ರಾಣ ಬಿಟ್ಟಿದ್ದಳು. ಸಾಯುವಾಗ ಅವಳ ಕಣ್ಣುಗಳು ತೆರೆದಿದ್ದವು!

ಈ ಕೃತ್ಯ ಎಸಗಿದ್ದು ಲಮಾರಿಕಸ್ ಡೇವಿಡ್ಸನ್ ಎಂಬ ಕ್ರಿಮಿನಲ್ ಮತ್ತು ಅವನ ಗ್ಯಾಂಗ್. ಇವರು ಈ ಜೋಡಿಯನ್ನು ಕೇವಲ ಕಾರ್ ದರೋಡೆ ಮಾಡಲು ಅಪಹರಿಸಿದ್ದರು. ಆದರೆ ಆ ರಾತ್ರಿ ಅವರು ಮೃಗಗಳಿಗಿಂತ ಕಡೆಯಾಗಿ ವರ್ತಿಸಿದರು. ಕ್ರಿಸ್ನನ್ನು ಕೊಲ್ಲುವ ಮೊದಲು ಅವನ ಮೇಲೆ ವಿಕೃತವಾದ *ತ್ಯಾಚಾರ ನಡೆಸಿ, ಶಾನನ್ ಕಣ್ಣೆದುರೇ ಅವನಿಗೆ ಚಿತ್ರಹಿಂಸೆ ನೀಡಿದರು. ನಂತರ ಶಾನನ್ ಮೇಲೂ ಅಷ್ಟೇ ಭೀಕರವಾಗಿ ಹಲ್ಲೆ ಮಾಡಿ, ಅವಳ ಉಸಿರು ನಿಲ್ಲುವವರೆಗೆ ಕಿರುಕುಳ ನೀಡಿದರು. ಈ ಗ್ಯಾಂಗ್ನಲ್ಲಿದ್ದ ಐವರು ಆರೋಪಿಗಳು ಮನುಷ್ಯತ್ವವನ್ನೇ ಮರೆತಿದ್ದರು. ಲಮಾರಿಕಸ್ ಡೇವಿಡ್ಸನ್, ಲೆಟಲ್ವಿಸ್ ಕೋಬಿನ್ಸ್, ಜಾರ್ಜ್ ಥಾಮಸ್, ವನೆಸಾ ಕೋಲ್ಮನ್ ಮತ್ತು ಎರಿಕ್ ಬಾಯ್ಡ್ – ಈ ಐವರ ಕ್ರೌರ್ಯಕ್ಕೆ ಆ ಮುಗ್ಧ ಜೀವಗಳು ಬಲಿಯಾದವು. ವನೆಸಾ ಎಂಬ ಮಹಿಳೆ ಅಲ್ಲೇ ಇದ್ದರೂ ಶಾನನ್ ಆರ್ತನಾದಕ್ಕೆ ಸ್ಪಂದಿಸಲಿಲ್ಲ. ಬ್ಲೀಚ್ ಹಾಕಿ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ ಇವರ ಪ್ಲಾನ್ ಗೂಗಲ್ ಸರ್ಚ್ ಮತ್ತು ಸಿಕ್ಕ ಸಣ್ಣ ಸಾಕ್ಷ್ಯಗಳಿಂದ ಬಯಲಿಗೆ ಬಂತು.
ಒಂದು ಸಾಮಾನ್ಯ ಕಾರ್ ದರೋಡೆಯಿಂದ ಶುರುವಾದ ಈ ಘಟನೆ ಇಷ್ಟೊಂದು ವಿಕೃತ ರೂಪ ಪಡೆಯಲು ಕಾರಣವೇನು? ದರೋಡೆಕೋರರ ಮನಸ್ಸಿನಲ್ಲಿದ್ದ ಆ ವಿಷ ಯಾವುದು? ಆರೋಪಿಗಳ ಬಂಧನದ ನಂತರ ಸಿಕ್ಕ ಒಂದು ಡೈರಿ ಈ ಕೇಸ್ನ ಇನ್ನೊಂದು ಮುಖವನ್ನು ತೆರೆದಿಟ್ಟಿತು. ಆ ಡೈರಿಯಲ್ಲಿ ವನೆಸಾ ಬರೆದಿದ್ದ ಮಾತುಗಳು ಅವಳ ವಿಕೃತ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದ್ದವು. ಶಾನನ್ ಕ್ರಿಶ್ಚಿಯನ್ ಅದೇ ಮನೆಯಲ್ಲಿ ಸಾವು-ಬದುಕಿನ ನಡುವೆ ನರಳುತ್ತಾ ಕಿರುಚುತ್ತಿದ್ದರೂ, ಪಕ್ಕದ ಕೋಣೆಯಲ್ಲಿದ್ದ ವನೆಸಾ ಮಾತ್ರ ಅದನ್ನೊಂದು ‘ಸಂಭ್ರಮ’ ಎಂಬಂತೆ ತನ್ನ ಡೈರಿಯಲ್ಲಿ ದಾಖಲಿಸಿದ್ದಳು. ಆಕೆ ಬರೆದಿದ್ದಳು, “ನಾನು ಈ ನಗರಕ್ಕೆ ಬಂದಾಗಿನಿಂದ ನನ್ನ ಜೀವನ ತುಂಬಾ ರೋಮಾಂಚನಕಾರಿಯಾಗಿದೆ (Exciting). ಕಳೆದ ರಾತ್ರಿ ನಿಜಕ್ಕೂ ವಿಭಿನ್ನವಾಗಿತ್ತು ಮತ್ತು ತುಂಬಾ ಆಸಕ್ತಿದಾಯಕವಾಗಿತ್ತು. ಇಂತಹ ವಿಚಿತ್ರ ಅನುಭವಗಳಿಂದ ನಾನು ಹೊಸ ಪಾಠಗಳನ್ನು ಕಲಿಯುತ್ತಿದ್ದೇನೆ. ಈ ವರ್ಷ ಇನ್ನೂ ಉದ್ದವಾಗಿದೆ ಮತ್ತು ಕಲಿಯಲು ಬಹಳಷ್ಟಿದೆ!” ಒಬ್ಬ ಹೆಣ್ಣು ಮಗಳ ಮೇಲೆ ತನ್ನ ಕಣ್ಣೆದುರೇ ಅಮಾನವೀಯ *ತ್ಯಾಚಾರ ಮತ್ತು ಹಲ್ಲೆ ನಡೆಯುತ್ತಿದ್ದರೂ, ಅದನ್ನೊಂದು ‘ಅಡ್ವೆಂಚರ್’ ಅಥವಾ ‘ರೋಮಾಂಚನ’ ಎಂದು ಕರೆದ ಆಕೆಯ ಮನಸ್ಥಿತಿ ಎಂತಹ ರಾಕ್ಷಸೀ ಪ್ರವೃತ್ತಿಯದ್ದು ಎಂಬುದು ಇಡೀ ಜಗತ್ತಿಗೆ ಅರಿವಾಯಿತು. ಈ ಡೈರಿಯ ಸಾಲುಗಳೇ ಆಕೆಗೆ ಕಠಿಣ ಶಿಕ್ಷೆ ಸಿಗುವಂತೆ ಮಾಡುವಲ್ಲಿ ಪ್ರಮುಖ ಸಾಕ್ಷಿಯಾದವು.

ನ್ಯಾಯ ಸಿಕ್ಕಿತೇ? ಸಮಯದ ಆಟ ಮತ್ತು ಇಂದಿನ ಕರಾಳ ಸತ್ಯ!
ಆರೋಪಿಗಳ ಬಂಧನದ ನಂತರ ನಡೆದ ಕೋರ್ಟ್ ವಿಚಾರಣೆ ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ದೊಡ್ಡ ಸಂಚಲನ ಮೂಡಿಸಿತು. ಲಮಾರಿಕಸ್ ಡೇವಿಡ್ಸನ್ಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಉಳಿದವರಿಗೆ ಜೀವನಪರ್ಯಂತ ಜೈಲು ಶಿಕ್ಷೆ ನೀಡಲಾಯಿತು. ಜಡ್ಜ್ ಈ ಕೇಸನ್ನು “ನಾನು ಕಂಡ ಅತ್ಯಂತ ಕ್ರೂರ ಮತ್ತು ಅಮಾನವೀಯ ಕೃತ್ಯ” ಎಂದು ಬಣ್ಣಿಸಿದರು. 2016ರಲ್ಲಿ ಸುಪ್ರೀಂ ಕೋರ್ಟ್ ಕೂಡ ಡೇವಿಡ್ಸನ್ನ ಮರಣದಂಡನೆಯನ್ನು ಎತ್ತಿಹಿಡಿಯಿತು.
ಇಂದು ಆ ಹತ್ಯೆ ನಡೆದ ಸ್ಥಳದಲ್ಲಿ ಒಂದು ಸ್ಮಾರಕವಿದೆ. ಆ ಇಡೀ ಮನೆಯನ್ನು ಕೆಡವಿ ಹಾಕಲಾಗಿದೆ. ಆದರೆ ಆ ಪೋಷಕರ ಎದೆಯಲ್ಲಿರುವ ನೋವು ಮಾತ್ರ ಹಾಗೆಯೇ ಇದೆ. ಈ ಕೇಸ್ ಕೇವಲ ಕ್ರೈಮ್ ಅಲ್ಲ, ಇದು ಜನಾಂಗೀಯ ದ್ವೇಷದ ಚರ್ಚೆಯನ್ನೂ ಹುಟ್ಟುಹಾಕಿತ್ತು. ಬಿಳಿಯರ ಮೇಲಿನ ನಫ್ರತ್ನಿಂದ ಈ ಕೃತ್ಯ ನಡೆದಿದೆಯೇ ಅಥವಾ ಕೇವಲ ಅಹಂಕಾರದ ಪ್ರದರ್ಶನವೇ ಎಂಬ ಪ್ರಶ್ನೆ ಇಂದಿಗೂ ಕಾಡುತ್ತಿದೆ. ದ್ವೇಷ ಮತ್ತು ಲಾಲಸೆ ಮನುಷ್ಯನನ್ನು ಎಂತಹ ರಾಕ್ಷಸನನ್ನಾಗಿ ಮಾಡಬಲ್ಲದು ಎಂಬುದಕ್ಕೆ ಇದು ಜೀವಂತ ಉದಾಹರಣೆ.
ಈ ಕಥೆ ನಮಗೆ ಕೆಲವು ದೊಡ್ಡ ಪಾಠಗಳನ್ನು ಕಲಿಸುತ್ತದೆ. ಮೊದಲನೆಯದು, ಅಪರಿಚಿತ ಪ್ರದೇಶಗಳಲ್ಲಿ ನಾವಿರಬೇಕಾದ ಎಚ್ಚರಿಕೆ. ಎರಡನೆಯದು, ಅನಾಹುತ ನಡೆದ ತಕ್ಷಣ ಪೊಲೀಸರು ಸ್ಪಂದಿಸದಿದ್ದರೆ ಅದು ಎಂತಹ ದುರಂತಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು. ಶಾನನ್ ಮತ್ತು ಕ್ರಿಸ್ ತಮ್ಮ ಜೀವನದ ಅತೀ ದೊಡ್ಡ ಹಂತಕ್ಕೆ ತಲುಪುವ ಮೊದಲೇ ವಿಧಿ ಮತ್ತು ಕೆಲವು ವಿಕೃತ ಮನಸ್ಸುಗಳ ಆಟಕ್ಕೆ ಬಲಿಯಾದರು.

ನಮ್ಮ ಸಮಾಜದಲ್ಲಿ ಇಂದಿಗೂ ಇಂತಹ ಕ್ರೂರ ಮನಸ್ಥಿತಿಗಳು ಅಡಗಿ ಕುಳಿತಿವೆ. ಹಗಲು ರಾತ್ರಿ ಎನ್ನದೆ ನಾವು ಎಚ್ಚರದಿಂದ ಇರಬೇಕಾದ ಅನಿವಾರ್ಯತೆ ಇದೆ. ನ್ಯಾಯ ಸ್ವಲ್ಪ ತಡವಾದರೂ ಸಿಕ್ಕಿದೆ ಎಂಬುದು ಸಮಾಧಾನವಾದರೂ, ಆ ಎರಡು ಜೀವಗಳು ಮತ್ತೆ ಬರಲು ಸಾಧ್ಯವಿಲ್ಲ. ಶಾನನ್ ಮತ್ತು ಕ್ರಿಸ್ ಅವರ ಕುಟುಂಬಕ್ಕೆ ಈಗಲೂ ಆ ಘಟನೆ ನಿನ್ನೆಯಷ್ಟೇ ನಡೆದಂತೆ ಭಾಸವಾಗುತ್ತಿದೆ.
ಗೆಳೆಯರೇ, ಮನುಷ್ಯನ ಮುಖವಾಡದ ಹಿಂದೆ ಅಡಗಿರುವ ಈ ರಾಕ್ಷಸೀ ಪ್ರವೃತ್ತಿಯ ಕಥೆ ಕೇಳಿ ನಿಮಗೇನನ್ನಿಸಿತು? ಇಂದಿನ ಸಮಾಜದಲ್ಲಿ ನಮ್ಮ ರಕ್ಷಣೆ ನಮ್ಮ ಕೈಯಲ್ಲೇ ಇದೆಯೇ? ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ. ಇಂತಹ ಮತ್ತಷ್ಟು ಆಸಕ್ತಿದಾಯಕ ಮತ್ತು ಅಚ್ಚರಿಯ ನೈಜ ಕ್ರೈಮ್ ಕಥೆಗಳಿಗಾಗಿ ನಮ್ಮ ‘ಇನ್ಸೈಡರ್ ಕನ್ನಡ’ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ. ಮುಂದಿನ ಭಾಗದಲ್ಲಿ ಮತ್ತೊಂದು ಬೆಚ್ಚಿಬೀಳಿಸುವ ನಿಗೂಢ ಇತಿಹಾಸದ ಸತ್ಯದೊಂದಿಗೆ ಸಿಗೋಣ. ಅಲ್ಲಿಯವರೆಗೆ ಸುರಕ್ಷಿತವಾಗಿರಿ, ನಮಸ್ಕಾರ!
