
ಶಾಂತವಾಗಿ ಹರಿಯುವ ನದಿಯ ದಡದಲ್ಲಿ ಅಡಗಿದ್ದ ಆ ಭೀಕರ ರಹಸ್ಯವೇನು?
ಓದುಗರೇ, ನಿಮ್ಮ ಪಕ್ಕದ ಮನೆಯವನು ತುಂಬಾ ಒಳ್ಳೆಯವನಂತೆ ಕಂಡರೆ ಅವನು ಸಾಚಾ ಅಂತ ಅಂದುಕೊಳ್ಬೇಡಿ. ಒಬ್ಬ ಮನುಷ್ಯ ಬೆಳಿಗ್ಗೆ ಎದ್ದು ಆಫೀಸಿಗೆ ಹೋಗಿ, ಸಂಜೆ ಹೆಂಡತಿ ಮಕ್ಕಳ ಜೊತೆ ನಗ್ತಾ ಇರ್ತಾನೆ ಅಂದ್ರೆ ಅವನ ಹಿಂದೆ ಒಂದು ಕ್ರೂರ ಮೃಗ ಅಡಗಿರೋಕೆ ಸಾಧ್ಯನಾ? ಅಮೆರಿಕದ ಇತಿಹಾಸದಲ್ಲೇ ಅತೀ ಹೆಚ್ಚು ಹೆಣ್ಣುಮಕ್ಕಳನ್ನ ಬಲಿಪಡೆದ ಆ ರಾಕ್ಷಸ ಯಾರು ಗೊತ್ತಾ? ಆತ ಯಾಕೆ ಅಷ್ಟು ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ ಆರಾಮಾಗಿ ಓಡಾಡ್ತಾ ಇದ್ದ?
ಅದು 1982ರ ಮಳೆಗಾಲದ ಸಮಯ. ವಾಷಿಂಗ್ಟನ್ ರಾಜ್ಯದ ಕಿಂಗ್ ಕೌಂಟಿಯ ಗ್ರೀನ್ ರಿವರ್ ನದಿ ದಡದಲ್ಲಿ ಮಕ್ಕಳು ಆಟವಾಡ್ತಾ ಇದ್ರು. ಅಲ್ಲಿ ಅವರಿಗೆ ಕಂಡಿದ್ದು ಒಂದು ದೃಶ್ಯ ಅಲ್ಲ, ಅದು ಇಡೀ ದೇಶವನ್ನೇ ನಡುಗಿಸೋ ಭಯಾನಕ ಸತ್ಯದ ಆರಂಭ. 16 ವರ್ಷದ ವೆಂಡಿ ಕಾಫೀಲ್ಡ್ ಎಂಬ ಹುಡುಗಿಯ ಶವ ನದಿಯಲ್ಲಿ ತೇಲ್ತಾ ಇತ್ತು. ಆಕೆಯ ಮುಗ್ಧ ಮುಖ ನೋಡಿದ ಯಾರಿಗಾದರೂ ಕರುಳು ಚುರುಕ್ ಅನ್ನೋದಿತ್ತು. ಯಾರಿದು? ಈಕೆಯನ್ನು ಇಷ್ಟು ಕ್ರೂರವಾಗಿ ಕೊಂದವರು ಯಾರು? ಎಂಬ ಪ್ರಶ್ನೆ ಇಡೀ ರಾಜ್ಯವನ್ನೇ ನಡುಗಿಸಿತು.
ಆದರೆ, ಇದು ಕೇವಲ ಒಬ್ಬಳ ಕಥೆಯಾಗಿರಲಿಲ್ಲ. ಮುಂದಿನ ಒಂದು ತಿಂಗಳಲ್ಲೇ ಅದೇ ನದಿ ದಡದಲ್ಲಿ ಸಾಲು ಸಾಲು ಹೆಣ್ಣುಮಕ್ಕಳ ಹೆಣಗಳು ಬೀಳೋಕೆ ಶುರುವಾದವು. ಓದುಗರೇ, ಅಲ್ಲಿಗೆ ಪೊಲೀಸರಿಗೆ ಒಂದು ವಿಷಯ ಪಕ್ಕಾ ಆಯ್ತು – ತಮ್ಮ ಮಧ್ಯೆಯೇ ಒಬ್ಬ ಸರಣಿ ಹಂತಕ (Serial Killer) ಹುಟ್ಟಿಕೊಂಡಿದ್ದಾನೆ ಅಂತ. ಆತ ಬರೀ ಅಮಾಯಕ ಹುಡುಗಿಯರನ್ನ, ಮನೆಯಿಂದ ಓಡಿಬಂದವರನ್ನ ಮತ್ತು ಲೈಂಗಿಕ ಕಾರ್ಯಕರ್ತೆಯರನ್ನೇ ಟಾರ್ಗೆಟ್ ಮಾಡ್ತಾ ಇದ್ದ. ಇಡೀ ಭಾಗದ ಜನ ಮನೆಯಿಂದ ಹೊರಬರೋಕೆ ಹೆದರುವಂತಾಯ್ತು.
ಈ ಹಂತಕನನ್ನ ಮೀಡಿಯಾದವರು ‘ಗ್ರೀನ್ ರಿವರ್ ಕಿಲ್ಲರ್’ ಅಂತ ಕರೆದರು. ಸಾವಿರಾರು ಪೊಲೀಸರು ಈತನ ಬೆನ್ನತ್ತಿದ್ರು, ಇತಿಹಾಸದಲ್ಲೇ ದೊಡ್ಡದಾದ ಟಾಸ್ಕ್ ಫೋರ್ಸ್ ರಚನೆಯಾಯ್ತು. ಆದರೂ ಪೊಲೀಸರಿಗೆ ಒಂದೂ ಸುಳಿವು ಸಿಗ್ತಾ ಇರಲಿಲ್ಲ. ಹಂತಕ ತುಂಬಾ ಜಾಣನಾಗಿದ್ದ, ಪ್ರತಿ ಬಾರಿ ಕೊಲೆ ಮಾಡಿದ ಮೇಲೂ ಒಂದೂ ಸಾಕ್ಷಿ ಬಿಡದಂತೆ ಎಚ್ಚರಿಕೆ ವಹಿಸ್ತಾ ಇದ್ದ. ಪೊಲೀಸರು ಕತ್ತಲಲ್ಲಿ ಕೈ ಸವರುತ್ತಾ ಕುಳಿತಿದ್ರು, ಇತ್ತ ಒಂದಾದ ಮೇಲೊಂದರಂತೆ ಹೆಣಗಳು ಬೀಳ್ತಲೇ ಇತ್ತು.
ಓದುಗರೇ, ಇಷ್ಟೆಲ್ಲಾ ರಾದ್ಧಾಂತ ಮಾಡ್ತಾ ಇದ್ದ ಆ ಸೈಕೋ ಯಾರು ಗೊತ್ತಾ? ಆತನ ಹೆಸರು ಗ್ಯಾರಿ ರಿಡ್ಗ್ವೇ. ಹೊರನೋಟಕ್ಕೆ ತುಂಬಾ ಸಾಮಾನ್ಯನಂತೆ, ಶಾಂತ ಸ್ವಭಾವದವನಂತೆ ಕಾಣ್ತಾ ಇದ್ದ ಈ ಗ್ಯಾರಿ, ಒಳಗಡೆ ಮಾತ್ರ ಸೈತಾನನನ್ನೇ ಇಟ್ಟುಕೊಂಡಿದ್ದ. ಆತನ ಮುಖ ನೋಡಿದ್ರೆ ಈತ ಇಷ್ಟೊಂದು ಕೊಲೆ ಮಾಡ್ತಾನೆ ಅಂತ ಯಮಧರ್ಮ ಕೂಡ ಊಹಿಸಿರಲಿಕ್ಕಿಲ್ಲ. ಅಷ್ಟಕ್ಕೂ ಈ ಗ್ಯಾರಿ ಇಷ್ಟೊಂದು ಕ್ರೂರವಾಗಿ ಬೆಳೆದಿದ್ದು ಹೇಗೆ? ಆತನ ಬಾಲ್ಯದಲ್ಲಿ ಅಡಗಿದ್ದ ಕರಾಳ ಕಥೆ ಏನು?
ಧರ್ಮಗ್ರಂಥ ಹಿಡಿದು ಓದುತ್ತಿದ್ದ ಕೈಗಳಲ್ಲಿ ಅಡಗಿತ್ತು ರಕ್ತದ ಕಲೆ!
ಓದುಗರೇ, ಗ್ಯಾರಿ ರಿಡ್ಗ್ವೇ ಎಂಬ ಈ ಮೃಗ ಬೆಳೆದಿದ್ದೇ ಒಂದು ವಿಚಿತ್ರ ಸನ್ನಿವೇಶದಲ್ಲಿ. ಈತನ ತಾಯಿ ತುಂಬಾ ಸ್ಟ್ರಿಕ್ಟ್ ಆಗಿದ್ರು, ಆಕೆಯ ದರ್ಪ ಮತ್ತು ಈತನ ಮೇಲೆ ಮಾಡ್ತಾ ಇದ್ದ ಅವಮಾನಗಳೇ ಈತನ ತಲೆಯಲ್ಲಿ ಹೆಣ್ಣುಮಕ್ಕಳ ಬಗ್ಗೆ ದ್ವೇಷ ಹುಟ್ಟುವಂತೆ ಮಾಡಿತು. ಹೈಸ್ಕೂಲ್ನಲ್ಲಿ ಈತ ಓದಿನಲ್ಲಿ ಹಿಂದೆ ಇದ್ದರೂ, ಕ್ರೌರ್ಯದಲ್ಲಿ ಮಾತ್ರ ಎತ್ತಿದ ಕೈ. ಚಿಕ್ಕವನಿದ್ದಾಗ ಹಕ್ಕಿಗಳನ್ನ ಕೊಂದರೆ ಸಮಾಧಾನ ಸಿಗದ ಈತ, ಒಮ್ಮೆ ಆರು ವರ್ಷದ ಮಗುವಿನ ಲಿವರ್ಗೆ ಚಾಕುವಿನಿಂದ ಇರಿದು ಮಜಾ ನೋಡಿದ್ದ ಕಿರಾತಕ ಈತ!
ಮುಂದೆ ಈತ ನೌಕಾಪಡೆಗೆ (Navy) ಸೇರಿದ, ವಿಯೆಟ್ನಾಂ ಯುದ್ಧಕ್ಕೂ ಹೋಗಿ ಬಂದ. ಅಲ್ಲಿ ಲೈಂಗಿಕ ಕಾರ್ಯಕರ್ತೆಯರ ಸಂಪರ್ಕಕ್ಕೆ ಬಂದಾಗ ಈತನಿಗೆ ರೋಗವೊಂದು ಅಂಟಿಕೊಂಡಿತು. ಇದೇ ಈತನ ಜೀವನದ ಟರ್ನಿಂಗ್ ಪಾಯಿಂಟ್. ತನ್ನೊಳಗೆ ಇದ್ದ ದ್ವೇಷವನ್ನ ಈತ ಆ ವರ್ಗದ ಮಹಿಳೆಯರ ಮೇಲೆ ತೀರಿಸಿಕೊಳ್ಳೋಕೆ ಪ್ಲಾನ್ ಮಾಡಿದ. ವಾಪಸ್ ಬಂದ ಮೇಲೆ ಈತ ಎರಡು ಮೂರು ಮದುವೆಯಾದ್ರೂ, ಹೊರಗಡೆ ಸಾಚಾ ಮನುಷ್ಯನಂತೆ ನಟಿಸ್ತಾ ಇದ್ದರೂ, ಒಳಗಿನ ರಾಕ್ಷಸ ಮಾತ್ರ ಸಾಯಲಿಲ್ಲ.
ಈತ ಎಷ್ಟು ವಿಚಿತ್ರವಾಗಿದ್ದ ಅಂದ್ರೆ, ಒಂದು ಕಡೆ ಮನೆ ಮುಂದೆ ನಿಂತು ಬೈಬಲ್ ಓದುತ್ತಾ ಎಲ್ಲರಿಗೂ ಧರ್ಮೋಪದೇಶ ಮಾಡ್ತಾ ಇದ್ದ. ಆದರೆ ಅದೇ ಧರ್ಮಗ್ರಂಥ ಹಿಡಿದ ಕೈಗಳಿಂದ ರಾತ್ರಿಯಾದರೆ ಹೆಣ್ಣುಮಕ್ಕಳ ಕತ್ತು ಹಿಸುಕಿ ಪ್ರಾಣ ತೆಗಿತಾ ಇದ್ದ. ಈ ಗ್ಯಾರಿ ಎಂತಾ ಕಿರಾತಕ ಅಂದ್ರೆ, ತಾನು ಟಾರ್ಗೆಟ್ ಮಾಡಿದ ಹುಡುಗಿಯರ ನಂಬಿಕೆ ಗಳಿಸೋಕೆ ತನ್ನ ಮಗನ ಫೋಟೋ ತೋರಿಸ್ತಾ ಇದ್ದ. “ನೋಡಿ ನನಗೂ ಮಗನಿದ್ದಾನೆ, ನಾನು ಫ್ಯಾಮಿಲಿ ಮ್ಯಾನ್” ಅಂತ ನಂಬಿಸಿ ಅವರನ್ನ ಗಾಡಿಗೆ ಹತ್ತಿಸಿಕೊಳ್ತಾ ಇದ್ದ.
ಬಲಿಪಶು ಗಾಡಿ ಹತ್ತಿದ ಮೇಲೆ ಮುಗಿಯಿತು, ಅಲ್ಲಿಂದ ಅವಳು ವಾಪಸ್ ಬರೋಕೆ ಚಾನ್ಸೇ ಇರಲಿಲ್ಲ. ಈತ ಸಾಯಿಸೋಕೆ ಬಳಸುತ್ತಿದ್ದ ಐಡಿಯಾ ಒಂದೇ – ಕುತ್ತಿಗೆಗೆ ಕೈ ಹಾಕಿ ಉಸಿರುಗಟ್ಟಿಸಿ ಸಾಯಿಸೋದು. ಆಮೇಲೆ ಶವಗಳನ್ನ ಗ್ರೀನ್ ರಿವರ್ ನದಿಗೆ ಎಸೆಯೋದು ಅಥವಾ ಕಾಡಿನಲ್ಲಿ ಹೂತು ಹಾಕೋದು. ಓದುಗರೇ, ಈತನ ವಿಕೃತಿ ಇಲ್ಲಿಗೆ ನಿಲ್ಲಲ್ಲ. ಈತ ಎಷ್ಟು ನೀಚ ಅಂದ್ರೆ, ತಾನು ಹೂತು ಹಾಕಿದ ಶವಗಳ ಬಳಿ ಮತ್ತೆ ಮತ್ತೆ ಹೋಗಿ ಅಲ್ಲಿ ವಿಕೃತವಾಗಿ ವರ್ತಿಸ್ತಾ ಇದ್ದ.
ಪೊಲೀಸರು ಈತನನ್ನ ಒಂದು ಬಾರಿ ಅಲ್ಲ, ನೂರಾರು ಬಾರಿ ವಿಚಾರಣೆ ಮಾಡಿದ್ರು. ಆದ್ರೂ ಇವನು ಸಿಕ್ಕಿಬೀಳಲಿಲ್ಲ. ಈತ ಎಷ್ಟು ದೊಡ್ಡ ಸೋಷಿಯೋಪಥ್ ಅಂದ್ರೆ, ಸುಳ್ಳು ಪತ್ತೆ ಮಾಡುವ ಪಾಲಿಗ್ರಾಫ್ ಟೆಸ್ಟ್ನಲ್ಲೂ ಕೂಡ ಪೊಲೀಸರಿಗೆ ನಾಮ ಹಾಕಿ ಪಾಸಾಗಿ ಬಿಟ್ಟಿದ್ದ. ಇವನು ಮನುಷ್ಯನೋ ಅಥವಾ ರಕ್ತಪಿಪಾಸು ಪ್ರಾಣಿಯೋ ಅಂತ ಪೊಲೀಸರೇ ಕನ್ಫ್ಯೂಸ್ ಆಗಿದ್ರು. ಆದ್ರೆ ಸತ್ಯ ಯಾವತ್ತಿದ್ರೂ ಹೊರಬರಲೇಬೇಕಲ್ಲವೇ?
48 ಕೊಲೆಗಳು ಮತ್ತು ತಪ್ಪಿಸಿಕೊಂಡ ಮೃಗದ ಅಂತಿಮ ಅಂತ್ಯ!
ಓದುಗರೇ, ಸುಮಾರು ಎರಡು ದಶಕಗಳ ಕಾಲ ಈತ ಯಾರ ಕೈಗೂ ಸಿಗದೆ ಆಟ ಆಡಿಸಿದ. 1980ರ ದಶಕದಿಂದ ಹಿಡಿದು 2000ರ ವರೆಗೂ ಇವನ ಭೇಟೆ ನಡೀತಲೇ ಇತ್ತು. ತಾನು ಮಾಡಿದ ಕೊಲೆಗಳ ಸಾಕ್ಷ್ಯ ನಾಶ ಮಾಡೋಕೆ ಈತ ಬೇರೆ ಬೇರೆ ಕೆಟ್ಟ ಐಡಿಯಾಗಳನ್ನ ಮಾಡ್ತಾ ಇದ್ದ. ಬೇರೆಯವರ ಸಿಗರೇಟ್ ತುಂಡು ತಂದು ಶವದ ಪಕ್ಕ ಹಾಕೋದು, ನಕಲಿ ಚೀಟಿಗಳನ್ನ ಬಿಡೋದು ಹೀಗೆ ಪೊಲೀಸರನ್ನ ದಾರಿ ತಪ್ಪಿಸ್ತಾ ಇದ್ದ. ಆದರೆ ಕಾಲ ಬದಲಾದಂತೆ ವಿಜ್ಞಾನವೂ ಬೆಳೆಯಿತು.
2001ರಲ್ಲಿ ಜಗತ್ತಿಗೆ ಒಂದು ಸತ್ಯ ಗೊತ್ತಾಯ್ತು. 1987ರಲ್ಲಿ ಸಂಗ್ರಹಿಸಿದ್ದ ಈತನ DNA ಮಾದರಿಗಳು ಹೊಸ ತಂತ್ರಜ್ಞಾನದ ಮುಂದೆ ಸೋತು ಹೋದವು. ಲಾರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದ ಈ ಮೃಗನನ್ನ ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದರು. ಇಡೀ ದೇಶದ ಜನ ಆ ದಿನ ಟಿವಿ ಮುಂದೆ ಕುಳಿತು ಈತನ ಮುಖ ನೋಡ್ತಾ ಇದ್ರು. ಇಷ್ಟು ದಿನ ನಮ್ಮ ಮಧ್ಯೆಯೇ ಇದ್ದ ಈತನೇನಾ ಅಷ್ಟು ಕೊಲೆ ಮಾಡಿದ್ದು ಅಂತ ಎಲ್ಲರೂ ಬೆರಗಾಗಿದ್ರು.
ಆದರೆ ಕೋರ್ಟ್ನಲ್ಲಿ ಈತ ಕೊಟ್ಟ ಹೇಳಿಕೆಗಳು ಕೇಳಿ ಮನುಷ್ಯತ್ವ ಇರೋ ಯಾರಿಗಾದರೂ ಮೈ ಝಲ್ ಅನ್ನುತ್ತೆ. ಸಾವು ಗೆಲ್ಲೋಕೆ ಈತ ಒಂದು ಪ್ಲಾನ್ ಮಾಡಿದ. ತಾನು ಮಾಡಿದ ಎಲ್ಲಾ ಕೊಲೆಗಳ ಬಗ್ಗೆ ಸತ್ಯ ಹೇಳ್ತೀನಿ, ಶವಗಳಿರೋ ಜಾಗ ತೋರಿಸ್ತೀನಿ, ಬದಲಿಗೆ ನನಗೆ ಮರಣದಂಡನೆ ನೀಡಬೇಡಿ ಅಂತ ಕೋರ್ಟ್ ಮುಂದೆ ಬೇಡಿಕೊಂಡ. ತನಿಖೆ ಮುಂದುವರಿದಂತೆ ಒಂದೊಂದೇ ಶವಗಳ ರಹಸ್ಯ ಬಯಲಾಗ್ತಾ ಬಂತು. ಆ ಕರಾಳ ಸತ್ಯಗಳನ್ನ ಕೇಳಿ ಪೊಲೀಸರೇ ಕಣ್ಣೀರು ಹಾಕಿದ್ರು.
ಗ್ಯಾರಿ ರಿಡ್ಗ್ವೇ ಬರೋಬ್ಬರಿ 48 ಮಹಿಳೆಯರನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ! ಆದರೆ ಇವನು ಕೊಂದಿರೋದು 70ಕ್ಕೂ ಹೆಚ್ಚು ಜನ ಇರಬಹುದು ಅಂತ ಇಂದಿಗೂ ಸಂಶಯವಿದೆ. ಇವನಿಗೆ 48 ಬಾರಿ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಅಂದ್ರೆ ಸಾವು ಬರೋವರೆಗೂ ಈತ ಜೈಲಿನ ಕತ್ತಲಲ್ಲೇ ಕೊಳೆಯಬೇಕು. ತನ್ನ ಇಡೀ ಜೀವನವನ್ನ ಕ್ರೌರ್ಯದಲ್ಲೇ ಕಳೆದ ಈತನಿಗೆ ಜೈಲೇ ಈಗ ಮನೆಯಾಗಿದೆ. ಇಷ್ಟೊಂದು ವರ್ಷ ಯಾರಿಗೂ ತಿಳಿಯದಂತೆ ಸೈಕೋ ಆಗಿ ಬದುಕಿದ್ದು ಈ ಕ್ರೈಮ್ ಹಿಸ್ಟರಿಯಲ್ಲೇ ದೊಡ್ಡ ಶಾಕ್.
ಓದುಗರೇ, ಇಂದಿನ ಈ ಗ್ಯಾರಿ ರಿಡ್ಗ್ವೇ ಹಾಗೂ ಗ್ರೀನ್ ರಿವರ್ ಕಿಲ್ಲರ್ ಸತ್ಯ ಘಟನೆ ನಿಮಗೆ ಏನು ಅನ್ನಿಸಿತು? ಒಬ್ಬ ವ್ಯಕ್ತಿ ಸಮಾಜದ ಕಣ್ಣಿಗೆ ಸಾಚಾ ಆಗಿದ್ದುಕೊಂಡು ಇಷ್ಟು ಭೀಕರ ಕೊಲೆಗಳನ್ನು ಮಾಡಲು ಹೇಗೆ ಸಾಧ್ಯ? ಅಪರಿಚಿತರನ್ನ ನಂಬುವ ಮೊದಲು ನಾವು ಎಷ್ಟು ಎಚ್ಚರಿಕೆಯಿಂದ ಇರಬೇಕು? ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ಕಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ. ಇಂತಹ ಮತ್ತಷ್ಟು ಮೈ ಜುಮ್ ಅನ್ನಿಸುವ ಅಪರಾಧ ಕಥೆಗಳಿಗಾಗಿ ನಮ್ಮ ‘ಇನ್ಸೈಡರ್ ಕನ್ನಡ’ ವೆಬ್ಸೈಟ್ಗೆ ಭೇಟಿ ನೀಡುತ್ತಿರಿ.
ದಯವಿಟ್ಟು ಈ ಮಾಹಿತಿಯನ್ನು ಹೆಚ್ಚು ಜನರಿಗೆ ಶೇರ್ ಮಾಡೋ ಮೂಲಕ ನಮ್ಮ Insider ಕನ್ನಡಗೆ ಬೆಂಬಲ ನೀಡಡಿ. ನೀವು ನೀಡುವ ಬೆಂಬಲ ನಮಗೆ ಇಂತಹ ರೋಚಕ ಸತ್ಯಗಳನ್ನು ಹೊರತರಲು ಶಕ್ತಿ ನೀಡುತ್ತದೆ. ಮುಂದಿನ ಭಾಗದಲ್ಲಿ ಮತ್ತೊಂದು ನಡುಗಿಸುವ ಸತ್ಯದೊಂದಿಗೆ ಸಿಗೋಣ. ಅಲ್ಲಿಯವರೆಗೂ ಸುತ್ತಮುತ್ತಲಿನ ಜನರ ಬಗ್ಗೆ ಎಚ್ಚರವಾಗಿರಿ, ಸುರಕ್ಷಿತವಾಗಿರಿ. ಲೋಕ ಸಮಸ್ತ ಸುಖಿನೋ ಭವಂತು. ನಮಸ್ಕಾರ.
